ಪೇಪಸಿ -
 	ರೋಮ್ ನಗರದಲ್ಲಿರುವ ರೋಮನ್ ಕ್ಯಾತೊಲಿಕ್ ಮಹಾಗುರುವಿನ ಅಧಿಕಾರಕ್ಕೆ ಇರುವ ಹೆಸರು. ಈ ಪದದ ಮೂಲ ಲ್ಯಾಟಿನ್ ಭಾಷೆಯ ಪಪಾ, ಪೋಪ್ (ತಂದೆ) ಎಂಬುದು. ಪೋಪ್ ಮಹಾಗುರುವಿನ ಧಾರ್ಮಿಕ ಮತ್ತು ಲೌಕಿಕ ಅಧಿಕಾರಗಳನ್ನು ಇದು ಸೂಚಿಸುತ್ತದೆ. ಏಸುಕ್ರಿಸ್ತನ ನೇರ ಶಿಷ್ಯರಲ್ಲೊಬ್ಬನಾದ ಸಂತ ಪೀಟರನಿಂದ ಇದು ಪ್ರಾಪ್ತವಾಯಿತೆಂದು ಪ್ರತೀತಿ.

ರೋಮನ್ ಕ್ಯಾತೊಲಿಕ್ ಪಂಥದ ಮಠಗಳ ಮೇಲೂ ಮತ್ತು ಪೋಪ್ ಗುರುವಿನ ಸಾರ್ವಭೌಮ ಆಡಳಿತದಲ್ಲಿರುವ ರಾಜ್ಯಗಳಿಗೂ ಈ ಅಧಿಕಾರ ಅನ್ವಯಿಸುತ್ತದೆ. ಇದರ ಅಧಿಕೃತ ಘೋಷಣೆ 1870ರಲ್ಲಿ ಪ್ರಥಮವಾಗಿ ವ್ಯಾಟಿಕನ್ ಕೌನ್ಸಿಲಿನಿಂದ ಸಾದರಾಯಿತು. 
ಇದರ ಪ್ರಕಾರ ಜಗತ್ತಿನ ಎಲ್ಲ ರೋಮನ್ ಕ್ಯಾತೊಲಿಕ್ ಪಾದ್ರಿಗಳ, ಧಾರ್ಮಿಕ ಮುಖಂಡರ ಮತ್ತು ಮತಾನುಯಾಯಿಗಳ ಮೇಲೂ ಪೋಪ್ ಅಧಿಕಾರ ನಡೆಸುವ ಸ್ವಾತಂತ್ರ್ಯ ಹೊಂದಿದ್ದಾನೆ. ಕ್ರೈಸ್ತಮಠಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ವಾದವಿವಾದಗಳಲ್ಲೂ ಪೋಪ್ ಕೊಡುವ ನಿರ್ಧಾರವೇ ಅಂತಿಮ. ಈ ನಿರ್ಧಾರದ ಮೇಲೆ ವಿಶ್ವ ಕ್ರೈಸ್ತ ಮಂಡಲಿಗೆ (ಈಕ್ಯುಮೆನಿಕಲ್ ಕೌನ್ಸಿಲ್) ದೂರಿಡುವ ಅಧಿಕಾರ ಆಪಾದಿತರಿಗೆ ಇದೆಯೆಂದು ವಾದಿಸುವುದು ತಪ್ಪೆನ್ನಲಾಗಿದೆ.														(ಡಿ.ಎಸ್.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ